1450-1510. ಪೋರ್ಚುಗಲ್ಲಿನ ಸೇನಾನಾಯಕ. ಭಾರತದ ಪೋರ್ಚುಗೀಸ್ ಪ್ರದೇಶಗಳ ಪ್ರಥಮ ವೈಸ್ರಾಯ್ (1505). ಶ್ರೀಮಂತ ಕುಟುಂಬಕ್ಕೆ ಸೇರಿದವ. ಮೊಂಬಾಸಾವನ್ನು ಗೆದ್ದು, ಕೊಚ್ಚಿನ್ನಿಗೆ ಬಂದು ತಲುಪಿದ. ಅಂಜದೀವ್ ಮತ್ತು ಈಜಿಪ್ಷಿಯನ್ ಹಡಗುಗಳ ಪಡೆಗಳನ್ನು ಡಿಯೋ ಎಂಬಲ್ಲಿ ಸಂಪುರ್ಣವಾಗಿ ನಾಶಗೊಳಿಸಿದ (1509). 1509ನೆಯ ಡಿಸೆಂಬರ್ ತಿಂಗಳಿನಲ್ಲಿ ಮೂರು ನೌಕೆಗಳೊಡನೆ ಯುರೋಪಿಗೆ ಹೊರಟು ನಡುವೆ ಸಾಲ್ದಾನಾ ಕೊಲ್ಲಿಯಲ್ಲಿ ತಂಗಿದ. ಇಲ್ಲಿ ಹಾಟೆಂಟಾಟರ ಸಂಗಡ ಯುದ್ಧಮಾಡಿ ಕೊಲೆಗೀಡಾದ. ಈತನ ಜೊತೆಯಲ್ಲಿ 65 ಜನ ಪೋರ್ಚುಗೀಸರೂ ಮಡಿದರು. ಮಾರನೆಯ ದಿನ ಈತನ ಶವ ಸಿಕ್ಕಿತು. ಕೊಲೆಯಾದ ಸ್ಥಳದಲ್ಲಿಯೇ ಈತನ ಸಮಾಧಿಯನ್ನೂ ಮಾಡಲಾಯಿತು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ